Wednesday, February 29, 2012

ಡೈರಿ : ಪುಟ ೧







ಪುಟ ೧

ಮೊದಲ ಪುಟದಲ್ಲಿ ಅವಳದ್ದೇ ಕೈಯಿಂದ ಬರೆದ "ಇದು ನನ್ನ ಮನಸ್ಸು, ನೀವು ನನ್ನವ( ಳು/ನು ) ಆದರೆ ಮುಂದೆ ಹೋಗುವ ಮುಂಚೆ ಒಂದು ಕ್ಷಣ ಆಲೋಚಿಸು ...." ಅಂತ ಬರೆದಿದ್ದಳು, ನನ್ನಲ್ಲಿ ನಾನು ಅವಳವನಲ್ಲ ಎಂಬ ಅಸಡ್ಡೆ, ಅವಳು ತನ್ನ ಗೆಳೆಯರಲ್ಲಿ ಆ ಡೈರಿ ಓದಿ ಗೆಳೆತನ ಕಳೆದು ಕೊಳ್ಳಬೇಡಿ ಎಂಬ ವಾಕ್ಯವನ್ನು ಪರೋಕ್ಷವಾಗಿ ಆ ಎರಡು ಸಾಲಿನಲ್ಲಿ ಬರೆದಿದ್ದಾಳೆ ಎಂದು ಅರ್ಥೈಸುವ ಗೊಜೀಗೂ ನಾನು ಹೋಗಲಿಲ್ಲ.

ಆ ಡೈರಿ ಮಾಮೂಲಿನಂತೆ ಇತ್ತು, ಇದರಿಂದ ಅವಳ ಮನಸ್ಸು ತಿಳಿಯುವುದು ಸುಲಭವಾಗಿತ್ತು. ಪ್ರತಿ ದಿನದ ದಿನಚರಿ, ರಾತ್ರಿಯ ಕನಸಿನ ವರ್ಣನೆ, ಹದಿ ಹರೆಯದ ಮನಸ್ಸಿನ ತುಮುಲಗಳು, ಎಲ್ಲವು ಸೋಗಸಾಗಿ ಬರೆದಿದ್ದಳು,ಮೊದಲ ಪೇಜ್ ಮುಗಿಸುತಿದ್ದಂತೆ ಅವಳ ಹೆಸರು "ಶ್ರಾವಣಿ" ಅಂತ ಗೊತ್ತಾಯಿತು.
ಎಲ್ಲ ಪುಟವು ಅವಳ ಒಂದೊಂದು ಬಗೆಯ ವ್ಯಕ್ತಿತ್ವ ಬಿಚ್ಚುತ್ತಾ ಸಾಗುತಿತ್ತು. ಇಲ್ಲಿ  ರಿಕ್ಷಾ  ಓಡಿಸುತಿದ್ದ ವ್ಯಕ್ತಿ "ಅಣ್ಣಾ ಸ್ಟೇಷನ್ ಬಂತು " ಅಂದ.
"
ಸರಿಯಪ್ಪಾ... ನಿಮಗೆ ಅಭ್ಯಂತರವಿಲ್ಲದಿದ್ದರೆ... ನಾನು ಈ ಡೈರಿ ಕೊಂಡು ಹೋಗುತ್ತೇನೆ..."ಅಂದೆ.
ಅದಕ್ಕೆ ಅವ "ಆ ಮಗಳ ಮನಸ್ಸು ನನಗೂ ತಿಳಿಯ ಬೇಕಿದೆ... ನನ್ನ ಅವಳ ನಡುವಿನ ನೆನಪಿನ ಸಾಕ್ಷಿ ಆಗಿ ಆ ಡೈರಿ ನನಗೆ ಬೇಕು"ಅಂದ.
"
ಸರಿಯಣ್ಣ ನಾನು ಓದಿ ಮುಗಿಸಿ ಸೋಮವಾರದಂದು ನಿಮಗೆ ಹಿಂತಿರುಗಿಸುವೆ ... ನಿಮ್ಮ ಮೊಬಯಿಲ್ ನಂಬರ್ ಕೊಟ್ಟರೆ ಹಿತಿರುಗಿಸಲು ಸುಲಭ ವಾಗುವುದು "ಅಂದೆ.
ಅದಕ್ಕೆ ಅವರು ಅವರ ನಂಬರ್ ಕೊಟ್ಟರು, ಅದನ್ನು ದಾಮೋದರ್ ಮಂಗಳೂರ್ ಆಟೋ ರಾಜ್ ಎಂದು ನಾನು ನನ್ನ ಮೊಬೈಲ್ ನಲ್ಲಿ ಲೋಡ್ ಮಾಡಿಕೊಂಡೆ. ಅವಸರದಲ್ಲಿ ಅವರಿಗೆ ನನ್ನ ನಂಬರ್ ಕೊಡುವುದನ್ನೇ ಮರೆತೇ, ಬ್ಯಾಗ್ ಏರಿಸಿ ಆಗಲೇ ಸೇರಿರುವ ನೂರು ಜನರ ಸರತಿಯಲ್ಲಿ ನಾನು ಟಿಕೆಟ್ ಗಾಗಿ ನಿಂತೆ.

ಟ್ರೈನ್ ತುಂಬಿ ತುಳುಕುತ್ತಿತ್ತು. ಕಾಲೇಜ್ ಹುಡುಗರು ಮತ್ತು ದೈನಂದಿನ ಮಂಗಳೂರನ್ನು ಅವಲಂಬಿಸಿರುವ ಅದೆಷ್ಟೋ ಜನರ ಜೀವನಾಡಿ ಈ ಪೆಸೆನ್ಜರ್ ಆಗಿತ್ತು. ತಿಂಗಳಿಗೊಮ್ಮೆ ಯಾದರು ನಡೆಯುವ ಇಲ್ಲಿನ ಬಂದ್ ಗಾಲಿಗಳಿಗೆ ಹೆಚ್ಚಿನ ಶ್ರಮ ಒದಗಿಸುತ್ತಿತ್ತು. ಉಳಿದ ದಿನ ಕುಳಿತು ಕೊಳ್ಳಲು ಸೀಟ್ ಸಿಗುತಿತ್ತು ಆದರೆ ಇಂತಹ ದಿನಗಳಲ್ಲಿ ನಿಲ್ಲಲೂ ಸಾಧ್ಯ ವಿರದ ರೀತಿ ತುಂಬುತ್ತಿತ್ತು. ಆದರೆ ಎರಡು ಜಿಲ್ಲೆಯ ಅನಿವಾಸಿ ಕನ್ನಡಿಗರಿಗೆ ಇದನ್ನು ಬಿಟ್ಟು ಬೇರೆ ಮಾಧ್ಯಮ ವಿರುತ್ತಿರಲಿಲ್ಲ. ತಮ್ಮ ಗಾತ್ರವನ್ನು ಕುಗ್ಗಿಸಿ ಸಿಕ್ಕ ಜಾಗದಲ್ಲಿ ನೇರ ನಿಲ್ಲಲು ಪ್ರಯತ್ನಿಸುತ್ತಿದ್ದರು.
ಬಾಗ್ ನಲ್ಲಿದ್ದ ಆ ಡೈರಿಯ ಬಗ್ಗೆ ನನ್ನ ಮನಸ್ಸು ಮಿಡಿಯುತಿತ್ತು, ಸ್ವಲ್ಪ ಖಾಲಿಯಾಗುತಿದ್ದಂತೆ ಕೂತುಹಲ ತಾಳಲಾರದೆ ಬ್ಯಾಗ್ ನಿಂದ ಡೈರಿ ಹೊರ ತೆಗೆದೆ.
ಎಲ್ಲ ಪುಟಗಳನ್ನು ಟ್ರೈನ್ ನಲ್ಲಿ ಓದುವುದು ಅಸಾಧ್ಯವಾಗಿತ್ತು ಹಾಗೆ ಎಲ್ಲ ಪೇಜ್ ಗಳನ್ನೂ ಮೇಲಿಂದ ಮೇಲೆ ತಿರುವುತ್ತಾ ಹೋದೆ, ಎಲ್ಲ ನೀಲಿ ಶಾಯಿಯಲ್ಲಿ ಬರೆದ ಅಕ್ಷರಗಳು, ಅವಲ್ಲಿ ಕೆಲವು ಮಹತ್ವದ ದಿನಗಳನ್ನು ಅವಳು ಹಳದಿ ಬಣ್ಣದ ಮಾರ್ಕರ್ ನಿಂದ ಮಾರ್ಕ್ ಮಾಡಿದ್ದರೆ ಕೆಲವು ದಿನಗಳನ್ನು ಕೆಂಪಲ್ಲಿ, ಗೆಳೆಯರ ಹೆತ್ತವರ ಜನ್ಮ ದಿನಾಂಕಕ್ಕೆ ಕೇಕ್ ನ ಚಿತ್ರ ಬಿಡಿಸಿದ್ದಳು. ಹೀಗೆ ಮೇಲಿಂದ ಮೇಲೆ ಪುಟ ತಿರುವಿದಾಗ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ. ನಾನು ಇಳಿಯ ಬೇಕಾದ ಸ್ಟೇಷನ್ ಬಂತು.

ಮನೆಗೆ ತಲುಪಿದ ನನಗೆ ಡೈರಿ ಓದುವುದೇ ಮೊದಲ ಕೆಲಸ ವಾಗಿತ್ತು, ಮೊದಲಿಗೆ ಮಾರ್ಕ್ ಮಾಡಿರುವ ಪೇಜ್ ಓದುವ ಎಂದು ಕೊಂಡೆ.ಹಾಗೆ ಓದಲು ಮುಂದಾದೆ.ಮೊದಲಿಗೆ ಕೆಂಪು ಬಣ್ಣದಲ್ಲಿ ಮಾರ್ಕ್ ಮಡಿದ ಪುಟ ಓದುವುದು ನನ್ನ ಉದ್ದೇಶವಾಗಿತ್ತು, ಕಾರಣ ಕೆಂಪು ಪ್ರೀತಿಯ ಬಣ್ಣ, ಅದನ್ನು ಉಪಯೋಗಿಸಿ ಅವಳು ಅವಳ ಪ್ರೇಮ ಪರ್ವವನ್ನು ವಿವರಿಸಿದ್ದಳು.
ಹದಿಹರೆಯದ ಹೃದಯಕ್ಕೆ ಭಾವ ಮೆರವಣಿಗೆ ಹೊರಡಲು ಪ್ರೇಮಕ್ಕಿಂತ ಬೇರೆ ವಾದ್ಯ ಘೋಷಗಳು ಬೇಕಿಲ್ಲ. ಯಾರ ಪ್ರೇಮ ಕಥೆಯಾದರೆ ನಮಗೇನು, ಅದರಲ್ಲಿರುವ ಭಾವಗಳು ಒಂದೇ, ಪ್ರತಿ ಪ್ರೇಮದಲ್ಲಿ ನಾವು ನಮ್ಮನ್ನು ಅನ್ವೇಷಿಸ ಬಹುದು. ಈ ಉದ್ದೇಶದಿಂದಲೇ ಅವಳ ಮೊದಲ ಪ್ರೇಮ ಪುಟವನ್ನು ತೆರೆದೆ.

***********



ಜನವರಿ 24
"ಇಂದು ನಾನು ಮೊದಲ ಬಾರಿಗೆ ಪ್ರೇಮ ಪಾಶಕ್ಕೆ ಸಿಕ್ಕಿದ್ದೇನೆ ಎಂದು ಅರಿವಾದ ದಿನ. ಪ್ರೇಮದ ಪರಿಯ ವರ್ಣಿಸುವುದು ನನಗೆ ಗೋತ್ತಿಲ್ಲ, ಎರಡು ತಿಂಗಳ ಹಿಂದೆ ನನ್ನ ಗೆಳತಿಗೆ ಕರೆ ಕೊಟ್ಟ ಅವನಿಗೆ ನಾನೇ ಉತ್ತರಿಸಿದ್ದೆ, ಅವನಾಡಿದ 'ಸ್ನೇಹ ಇಲ್ವಾ ...?'ದಲ್ಲಿ ನಾನು ಏಕೋ ಅವನೆಡೆಗೆ ಆಕರ್ಷಿತಳಾದೆ ಎಂದು ಇಂದಿಗೂ ತಿಳಿಯದು. ಎರಡು ದಿನಗಳ ಬಳಿಕ ಅವನಲ್ಲಿ ಅದ್ಯಾಕೋ ಸೆಳೆತ ಹೆಚ್ಚಾಯಿತು, ನನ್ನ ಮೊಬೈಲ್ ನಿಂದ ನಾನು ಸುಮ್ಮನೆ ಒಂದು ಫಾರ್ವರ್ಡ್ ಮೆಸ್ಸೇಜ್ ಕಳಿಸಿದಕ್ಕೆ ಅವ ಉತ್ತರಿಸಿರಲಿಲ್ಲ.
ಮಾರನೆ ದಿನವು ಇನ್ನೊಂದು ಫಾರ್ವರ್ಡ್ ಕಳಿಸಿದ್ದೆ, ಅದಕ್ಕೂ ಅವನ ನೀರಸ ಪ್ರತಿಕ್ರಿಯೆ, ಇನ್ನೂ ನನ್ನಲ್ಲಿ ಸುಮ್ಮನಿರಲಾಗಲಿಲ್ಲ. ಅವ ರಿಪ್ಲೈ ಕಳುಹಿಸುವವರೆಗೆ ಸುಮ್ಮನೆ ಬ್ಲಾಂಕ್ ಮೆಸ್ಸೇಜ್ ಕಳಿಸುತ್ತಲೇ ಇದ್ದೆ. ಕೊನೆಗೆ ಒಂದು ದಿನ "May I Know you ..?" ಬಂತು.
ಆ ದಿನ ಏನೆಂದು ಉತ್ತರಿಸಲಿ, ಸ್ನೇಹಳ ಗೆಳತಿಯೆಂದು ಇವನಿಗೆ ಹೇಳವೆ ಅಂದು ಕೊಂಡೆ.
ಬೇಡ!!!!, ಅವಳಿಗೆ ನನ್ನಲ್ಲಿ ಅಸೂಯೆ ಮೂಡ ಬಹುದು; ಅವಳೂ ಅವನನ್ನು ಪ್ರಿತಿಸುತಿದ್ದಳು ಅವನಿಗೆ ಇವಳಲ್ಲಿ ಪ್ರೀತಿ ಇದೆಯಾ ಇಲ್ಲ ಎಂದು ತಿಳಿಯುವುದು ಅವಳಿಗಿನ್ನೂ ಸಾಧ್ಯವಾಗಿರಲಿಲ್ಲ.
ಬೇಡ !! ಈ ವಿಚಾರ ನನ್ನಲ್ಲೇ ಇರಲಿ, ಶ್ರಾವಣಿ ಎಂದು ಹೇಳುವುದು ಬೇಡ ಎಂದು ಬೇರೆ ಹೆಸರನ್ನೇ ಟೈಪಿಸಿದೆ, ಅವನಿಂದ ಅದಕ್ಕೆ ಒಂದು Smiley ಕಳುಹಿಸಿದ. ನಾನು ಅದಕ್ಕೆ ಒಂದು ಗೆಳೆತನದ ಕುರಿತಾದ ಫಾರ್ವರ್ಡ್ ಕಳುಹಿಸಿದೆ.

ಹೀಗೆ ನನ್ನ ಅವನ ಸ್ನೇಹ ಆರಂಭವಾಯಿತು.ಸ್ನೇಹ ಮೆಲ್ಲನೆ ಪ್ರೀತಿಗೆ ತಿರುಗಿತು. ಆದರೆ ಅವನಿಗೆ ನನ್ನಲ್ಲಿ ಪ್ರೀತಿ ಇದೆಯಾ ತಿಳಿಯುವುದು ಸಾಧ್ಯವಾಗಲಿಲ್ಲ ಈ ಎರಡು ತಿಂಗಳಲ್ಲಿ. ನಾನು ಅವನಿಗೆ ನನ್ನ ಪ್ರೀತಿಯ ವಿಚಾರ ಹೇಳಿರಲಿಲ್ಲ.
ಎಲ್ಲಿ ನಾನು ನನ್ನ ಗೆಳತಿಯ ಪ್ರಣಯದಲ್ಲಿ ಶತ್ರು ವಾಗುವೇನೋ ಎಂಬ ಭಯ ಮನದಲ್ಲಿತ್ತು, ಒಂದು ವೇಳೆ ಅವನೇ ನನ್ನನ್ನು ಪ್ರಿತಿಸುತಿದ್ದರೆ ಹೇಳುತ್ತಾನೆ, ಆ ದಿನ ನಾನೂ ನನ್ನ ಪ್ರಣಯ ಕತೆ ಹೇಳುತ್ತೇನೆ ಅಂದು ಕೊಂಡಿದ್ದೆ. 

ಅವನ ಕೊನೆಯ ಮೆಸ್ಸೇಜ್ ಬಂದು ಆಗಲೇ 28 ದಿನ 7 ಗಂಟೆ 3 ನಿಮಿಷ ಆಗಿತ್ತು ಎಂದು ಮನ ಮಿಡಿಯುತಿತ್ತು. ಅವನು ಕಳುಹಿಸಿದ ಮೆಸ್ಸೇಜ್ ಮನಸಲ್ಲಿ ಅಚ್ಚಾಗಿದ್ದರೂ ಅದೇ ಮೆಸ್ಸೇಜ್ ಅನ್ನು ನಾನೂ ಮೊಬೈಲ್ ನಲ್ಲಿ ಎರಡೂವರೆ ಸಾವಿರ ಬಾರಿಯಾದರೂ ಓದಿದ್ದೆ.
ಎಲ್ಲಿ ಅವ ನನ್ನ ಮರೆತು ಬಿಟ್ಟನೋ ಎಂದು ಕೊಂಡಿದ್ದೆ, ಆದರೆ ಅವನು ಸ್ನೇಹಳ ಪ್ರೇಮ ಪಾಶಕ್ಕೆ ಬಿಳಲಿಲ್ಲ ಎಂದು ಅವಳು ಪಡುವ ವೇದನೆ ಇಂದಲೇ ನನ್ನ ಮನ ಸಮಾಧಾನ ಪಟ್ಟುಕೊಳ್ಳುತಿತ್ತು. ಆದರೆ ಅವನಿಗೆ ಬೇರೆ ಯಾರಾದರೂ  ಜೊತೆ ಯಾದರೇ...? ಓದಿನಲ್ಲಿ ಬ್ಯುಸಿ ಆಗಿರುವನೇ ಎಂದೆಲ್ಲಾ ಪ್ರಶ್ನೆಗಳು ಅಡ್ಡಾಡುತಿದ್ದವು. ಗಳಿಗೆ ಗೆ ಗಳಿಗೆ ಕೊಡುತ್ತ ಹೋಗುತಿತ್ತು, ಮನದಲ್ಲಿನ ಭಾವನೆ ಯಾರಿಗೂ ಈ ವರೆಗೆ ಹೇಳಿರಲಿಲ್ಲ, ರೂಂ ನಲ್ಲಿರುವ ಸ್ನೇಹಳಿಗೆ ಹೇಳುವುದಾದರೂ ಹೇಗೆ ...? ಮನೆಯವರಿಗೆ...? ಹುಂ ಇಲ್ಲಾ...ಬೇರೆಯವರಿಗೆ ಹೇಳೋಣ ಎಂದರೂ ಇನ್ನೂ ಅವನ ಮನದಲ್ಲಿ ಏನಿದೆ ಎಂದು ತಿಳಿದಿರಲಿಲ್ಲ.ನಿನ್ನಲ್ಲಿ ಹೇಳಲು ಒಂದು ಬಗೆಯ ಹಿಂಜರಿಕೆ ನನ್ನಲ್ಲಿತ್ತು. ಇವತ್ತಿನ ರಹಸ್ಯ ಮುಂದೊಂದು ದಿನ ಬಯಲಾಗಲು ನೀನು ಮಾಧ್ಯಮ ಆಗುವುದು ನನಗೆ ಇಷ್ಟ ವಿರಲಿಲ್ಲ.ಇವತ್ತು ಅದನ್ನು ನಿನಗೆ ಹೆಳವ ಅನಿವಾರ್ಯತೆ ಬಂದಿದೆ.

ಸಂಜೆ ಐದರ ಸುಮಾರಿಗೆ ಅದೇ ನಂಬರ್ ನಿಂದ ಕರೆ ಬಂದಿತ್ತು. ನಾನೂ ಸ್ನೇಹಳೊಂದಿಗೆ ಇದ್ದೆ.
ಆ ನಂಬರ್ ಅನ್ನು ನಾನು ಶಶಿ ಎಂದು ಸೇವ್ ಮಾಡಿದ್ದೆ. ಸ್ನೇಹಾ ಒಮ್ಮೆ ಮೆಸ್ಸೇಜ್ ಮಾಡಬೇಕಿದ್ದರೆ ಶಶಿ ಯಾರೆಂದು ಕೇಳಿದಾಗ ಶಶಿಕಲಾ ಅಂದಿದ್ದೆ, ಆದರೆ ಅದು ನನ್ನ ಚಂದಿರನ ಸಂದೇಶ ಅಂತ ನನಗೊಬ್ಬಳಿಗೆ ತಿಳಿದಿದ್ದ ವಿಚಾರ.
ಸ್ನೇಹಾ ಮೊಬೈಲ್ ನೋಡುತ್ತಾ ಮಾತಾಡು ಎಂದಳು, ಮೊದಲ ಬಾರಿಗೆ  ಅವ ಕರೆ ನೀಡಿದ್ದ, ತನ್ನ ಸ್ನೇಹಿತೆಯ ಎದುರಲ್ಲೇ ಅವಳ ಪ್ರಿಯಕರನ ಕರೆ ನನ್ನ ಮೊಬೈಲ್ ಗೆ ಬಂದಾಗ ನಾನು ಹೇಗೆ ಅವನಿಗೆ ನನ್ನ ಮನದ ಮಾತು ಹೇಳಬಲ್ಲೆ ...?
ನಾನು ಮೊಬೈಲ್ ಅನ್ನು ಸೈಲೆಂಟ್ ಗೆ ಜಾರಿಸಿದೆ.

ಅವ ಎರಡನೇ ಬಾರಿಗೆ ಕರೆ ಮಾಡಿದರೂ ನಾನು ಅದನ್ನು ಎತ್ತಲಿಲ್ಲ. ಸ್ನೇಹಳೊಂದಿಗೆ ಯಾವುದೊ ಗಾಡ ವಿಚಾರದಲ್ಲಿ ಮುಳುಗಿರುವಂತೆ ಅಭಿನಯಿಸುತಿದ್ದೆ. ಸಂಜೆಯ ಏಳಕ್ಕೆ ಅವಳೊಂದಿಗೆ ಬಿಜೈ ನ ಭಾರತ್ ಮಾಲ್ ಗೆ ಹೋಗಿದ್ದಾಗ ಮೊಬೈಲ್ ಅನ್ನು ಬ್ಯಾಗ್ ನಲ್ಲಿ ಹಾಕಿದ್ದೆ. ಮತ್ತು ಆ ಜನ ಜಂಗುಳಿಯಲ್ಲಿ ಅವನ ಇನ್ನೊಂದು ಕಾಲ್ ಬಂದದ್ದು ಗೊತ್ತಾಗಲಿಲ್ಲ.
ರೂಮ್ಗೆ ಒಂಬತ್ತಕ್ಕೆ ತಲುಪಿದ ನಾನು ಮೊಬೈಲ್ ನೋಡಲು ಅವನ "I want to talk to you , plz pick the call " ಎಂಬ ಒಂದೇ ಮೆಸ್ಸೇಜ್ ಅನ್ನು ೪ ಸಲ ಕಳಿಸಿದ್ದ. ಈ ಮೆಸ್ಸೇಜ್ ಓದುತ್ತಲೇ ಮನದಲ್ಲಿ ಏನೋ ಒಂದು ತರಹದ ಸಂತಸ, ನನ್ನ ಮನದಲ್ಲಿರುವ ಕನಸು ಅವನ ಮನದಲ್ಲೂ ಇದೆ ಎಂಬ ಹುಚ್ಚು ಕಲ್ಪನೆ.

ಸ್ನೇಹ ಇವತ್ತು ಸುತ್ತಾಡಿ ಬಂದಂತೆ ಮಲಗಿದಳು, ಅವಳು ಮಲಗಿದ ಮೇಲೆ ನಾನು ಚಾರ್ಜ್ ಗೆ ಹಾಕಿದ ಮೊಬೈಲ್ ತೆಗೆದು ಅವನಿಗೆ "sorry !!! i was busy that time, will chat now " ಎಂದು ಕಳುಹಿಸಿದ ತಕ್ಷಣನೆ ಅವನ ಕರೆ ನನ್ನ ಮೊಬೈಲ್ ಗೆ ಬಂತು, ಮೊದಲಿಗೆ ಅವನೊಂದಿಗೆ ಮಾತನಾಡಲು ಏನೋ ಒಂದು ತರಹದ ಸಂಕೋಚ ಮತ್ತು ಭಯ.

ಆ ಬದಿಯಿಂದ ಅವನು "ಹಲೋ ..."
ನಾನು ಮೌನಿಯಾಗಿದ್ದೆ, ಅವನು ಎರಡು ಮೂರು ಬಾರಿ ಹಲೋ ಎಂದಾಗ ನಾನು ಮೆಲ್ಲನೆಯೇ ಹುಂ ಗುಟ್ಟಿದೆ.
ಅವನು ಮುಂದುವರೆಸಿದ "ಏಕೋ ನನಗೆ ನೀನೊಬ್ಬ ಒಳ್ಳೆ ಗೆಳತಿ ಅಂತೆ ಅನಿಸುತ್ತೆ, ನೀನು ನನ್ನೊಂದಿಗೆ ಮೆಸ್ಸೇಜ್ ಮಾಡುವ ಮೊದಲಲ್ಲಿ ನನಗೆ ನಿನ್ನ ಬಗ್ಗೆ ತಾಸ್ಸಾರವಿತ್ತು  ಆದರೆ ದಿನ ಕಳೆದಂತೆ ನಾನು ನಿನ್ನ ಮೆಸ್ಸೇಜ್ ಗಾಗಿ ಕಾಯುತ್ತ ಕುಳಿತದ್ದು ಇದೆ. ಇಲ್ಲಿಯ ವರೆಗೆ ನೀನು ಯಾರು ಎಂದು ನೀನು ನನ್ನಲ್ಲಿ  ಕೇಳಲಿಲ್ಲ, ನಾನು ನಿನಗೆ ನಾನು ಯಾರು ಅಂತ ಹೇಳಲಿಲ್ಲ, ನಾನಾಗೆ ಕೇಳಿದಾಗ ನೀನು ನಿನ್ನ ಹೆಸರು ಹೇಳಿದ್ದೆ. ನಿನಗೆ ನನ್ನ ನಂಬರ್ ಎಲ್ಲಿಂದ ಸಿಕ್ಕಿತು ಎಂದು ಕೇಳುವ ಗೊಜೀಗು ಹೋಗಿರಲಿಲ್ಲ.
ಹಾಗೆಯೇ ನೀನು ಕಳುಹಿಸಿದ ಮೆಸ್ಸೇಜ್ ಓದುತಿದ್ದೆ, ಎಲ್ಲಿಯಾದರೂ ಬಿಡುವಿದ್ದಾಗ ನನ್ನಲ್ಲಿದ್ದ ಉತ್ತಮದರಲ್ಲಿ ಉತ್ತಮ ಮೆಸ್ಸೇಜ್ ಗಳನ್ನೂ ಹುಡುಕಿ ನಿನಗೆ ಕಳುಹಿಸುತಿದ್ದೆ,"
ಇಲ್ಲಿಂದ ನನ್ನ ಬರಿ ಹ್ಮ್ಮ್ ಹೊರ ಹರಿಯುತಿದ್ದರೆ ಆ ಬದಿಯಲ್ಲಿ ಅವ ತನ್ನ ಮನಸಲ್ಲಿರುವುದನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಹೇಳುತಿದ್ದ.
"ನಾನು ನಿನ್ನ ಬಗ್ಗೆ, ತೋರಿದ ತಾಸ್ಸಾರ ದಿನ ಕಳೆದಂತೆ ದೂರವಾಯಿತು, ಮೊದಲಿಗೆ ನೀನೂ ನಾವಿಬ್ಬರು ಚಾಟ್ ಮಾಡುವ ಎಂದಾಗ ಅದ್ಯಾಕೋ ನಾನು ಉತ್ತರಿಸಲಿಲ್ಲ.ಮುಂದಿನ ಎರಡು ದಿನ ಮೊಬೈಲ್ ಅನ್ನು switch off  ಮಾಡಿ ಇಟ್ಟಿದ್ದೆ. ಎಲ್ಲಿ ನಿನ್ನಲ್ಲಿ ನಾನು ಕಳಕೊಳ್ಳುತ್ತೇನೆ ಎಂದು, ಹೀಗೆ ದಿನ ಮುಂದೆ ಹೋಗಲು ನಿನ್ನ ಬಗ್ಗೆ ಕಲ್ಪನೆ ಹೆಚ್ಚಾಗುತ್ತಾ ಹೋಯಿತು, ನನ್ನ ಸೆಮೆಸ್ಟರ್ ಪರೀಕ್ಷೆ ಬೇರೆ ಇದ್ದುದರಿಂದ ನಾನು ನಿನ್ನ ಕಡೆಗೆ ಹೆಚ್ಚು ಗಮನ ಕೊಡಲು ಆಗಲಿಲ್ಲ, ಮೊದಲಿಗೆ ನನಗೆ ನಿನ್ನದೇ ಕಲ್ಪನೆ ಇರುತಿತ್ತು ಆದರೆ ಸೆಮೆಸ್ಟರ್ ಪರೀಕ್ಷೆಗೆ ಕೆಲ ದಿನ ಇರುವಾಗ ಮನಸ್ಸು ಗಟ್ಟಿ ಮಾಡಿಕೊಂಡೆ, ಪರೀಕ್ಷೆ  ಮುಗಿಯುವವರೆಗೆ ನಾನು ನಿನ್ನ ಬಗ್ಗೆ ಚಿಂತಿಸುವುದಿಲ್ಲ, ಯಾವ ದಿನ ಪರೀಕ್ಷೆ ಮುಗಿಯುತ್ತೋ ಅಂದು ನನ್ನ ಮನದಲ್ಲಿನ ವಿಚಾರ ನಿನ್ನಲ್ಲಿ ಹೇಳುತ್ತೇನೆ, ಎಂದು"

ಗೊತ್ತಾಗದಂತೆ ನನ್ನ ಎದೆಬಡಿತ ಹೆಚ್ಚಾಯಿತು, ಮೊದಲು ಹುಂಕಾರ ಈಗ ಪೂರ್ಣವಾಗಿ ನಿಂತೇ ಹೋಯಿತು, ನಾನು ಹೇಳಬೇಕಾದದೆಲ್ಲ ಇವ ಹೇಳುತಿದ್ದಾನಲ್ಲಾ ಎಂಬಂತೆ ಆಯಿತು, ನಾನು ನಿಂತಲ್ಲಿಯೇ ಕಲ್ಲಾಗಿ ಹೋದೆ.

ಅವ ಮುಂದುವರೆಸಿದ "ನಾನು ನೀನೂ ಯಾರೆಂದು ತಿಳಿಯದೆ ನಿನ್ನೊಂದಿಗೆ ಗೊತ್ತಿಲ್ಲದ ಒಂದು ಸಂಭಂದ ಕಲ್ಪಿಸಿ ಕೊಂಡಿದ್ದೇನೆ, ನಿನ್ನನ್ನು ನನಗೆ ಕಳಕೊಳ್ಳಲು ಇಷ್ಟವಿಲ್ಲ, ನಿನ್ನ ಮನಸಲ್ಲಿ ಏನಿದೆ ಎಂದು ಗೊತ್ತಿಲ್ಲ, ನಾ ಕಲ್ಪಿಸಿದ ಸಂಭದಕ್ಕೆ ನೀನು ಯಾವ ಹೆಸರು ಕೊಡುತ್ತಿಯಾ..?" ಅಂದ.

ನನಗೆ ಏನು ಹೇಳ ಬೇಕು ಎಂದೇ ತಿಳಿಯಲಿಲ್ಲ ನಾನು ಮೌನ ವಾಗಿಯೇ ಇದ್ದೆ, ಅವ "ನಿನಗೂ ಹೆಸರು ಸಿಗುತಿಲ್ಲವೇ ..? ನಿನ್ನ ಮನಸಲ್ಲಿ ನನ್ನಲ್ಲಿನ ಭಾವನೆ ಬರುತಿದ್ದೆಯೇ ...?"ಅಂದ
"
ಹೌದು !!!"ಎಂಬ ಮಾತು ನನಗೆ ಗೊತ್ತಾಗದಂತೆ ಹೇಳಿಬಿಟ್ಟೆ.

ಅವನಿಗೂ ತುಂಬಾ ಖುಷಿಯಾಯಿತು ಅಂತ ಕಾಣುತ್ತೆ, ಅವನು ಮಾತಾಡಲಿಲ್ಲ ಮುಂದಿನ 120 ಸೆಕೆಂಡ್ , ಬಳಿಕ ಮಾತಾಡಲು ಯಾವುದೇ ವಿಚಾರಗಳು ಸುಳಿಯದೇ "ಸರಿ ಮಲಗೊಣವೇ ...?"ಅಂದ
ನಾನು "ಹುಂ "ಅಂದೆ.
ಬಳಿಕ "ಗುಡ್ ನೈಟ್ " ಅಂದ
ನಾನೂ...
ಅವನು ಒಂದು 6 ಬಾರಿ ಗುಡ್ ನೈಟ್ ಅಂದ (ಪಾಪ ಈಗ ಅವನಿಗೆ ನಾಚಿಕೆ ಆಗಿರ ಬಹುದು)
ಇಲ್ಲಿ ಸ್ನೇಹ"ಮಲಗಲ್ವಾ ನಾಳೆ ಬೆಳಗ್ಗೆ ಪಿಕ್-ನಿಕ್ ಹೋಗಬೇಕು, ಬೇಗ ಏಳಬೇಕು "ಅಂತ ಬೊಬ್ಬೆ ಹೊಡೆಯುತಿದ್ದಳು.
ನಾನು ಅವನಿಗೆ "ಗುಡ್ ನೈಟ್ " ಹೇಳಿದೆ. ಕರೆ ಕಟ್ ಮಾಡಿದೆ. ಅವನಿಗೆ ನನ್ನ ಮೌನದಣಿ ಆಲಿಸುವ ಆಸೆ ಇತ್ತು ಅನಿಸುತ್ತೆ.
ಬಂದು ನಿನ್ನಲ್ಲಿ ಎಲ್ಲ ವಿಚಾರ ಬರೆಯುತಿದ್ದೇ, Silent ಲ್ಲೇ ನನ್ನ ಮೊಬೈಲ್ ನಲ್ಲಿ "I LOVE YOU "ಅಂತ ಮೆಸ್ಸೇಜ್ ಕುಹಿಸಿದ ಅವ.
ನಾನು "ME TOO !!!" ಅಂತ ಕಳುಹಿಸಿದೆ. ನಾನು ಏನು ತಪ್ಪು ಮಾಡುತ್ತಿಲ್ಲ, ಎಂದು ನನ್ನ ಒಳ ಮನ ಹೇಳುತ್ತಿದೆ. ಸ್ನೇಹಾ ಅವನನ್ನು ಪ್ರಿತಿಸುತಿದ್ದಳು ಆದರೆ ಅವನಿಗೆ ನನ್ನ ಮೇಲೆ ಪ್ರೀತಿ ಬಂತು, ನನಗೂ ಅವನೆಂದರೆ ಇಷ್ಟ,

ಸದ್ಯಕ್ಕೆ ಈ ವಿಚಾರ ನನ್ನ ಮತ್ತು ನಿನ್ನಲ್ಲಿರಲಿ!!!! ಮೊಬೈಲ್ ನಲ್ಲಿ ಮತ್ತೆ ಬೆಳಕು ಬರುತ್ತಿದೆ, ಅವನು ನನ್ನನ್ನು ಮತ್ತೆ ನೆನಪಿಸಿರಬಹುದು. ನಿನ್ನನ್ನು ನನ್ನ ಮೌನದನಿಯ ಸಂಗಾತಿಯಾಗಿ ಆಯ್ದುಕೊಂಡಿದ್ದೆ, ಈಗ ನಿನಗೆ ಒಬ್ಬ ಕೊಂಪಿಟಿಟರ್
ಬಂದಿದ್ದಾನೆ. ಅವನಿಗೂ ನನ್ನ ಮೌನದನಿ ಹಿಡಿಸುತ್ತಿದೆ. ಅವನ ಮಾತು ಆಲಿಸಿ ನಿನ್ನಲ್ಲಿ ಹೇಳುತ್ತೇನೆ ಕೊಪಿಸ ಬೇಡ. ಇವತ್ತಿಗೆ ಮಲಗಿ ಕೋ.
ಗುಡ್ ನೈಟ್
ಶ್ರಾವಣಿ "
ಮೊದಲ ದಿನದ ಇವಳ ಕಥೆ ಓದುತಿದ್ದಂತೆ ನನ್ನಲ್ಲಿ ರೋಮಾಂಚನವಾಯಿತು.ನನ್ನ ಪ್ರಿಯತಮೆಗೆ ನಾನೂ ಪ್ರೊಪೋಸ್ ಮಾಡಿದ ಕತೆ ಗೆ ಇದು ಹೋಲಿಕೆ ಆಗುತಿತ್ತು. ಆದರೆ ನನ್ನ ಪ್ರಿಯತಮೆ  ಶ್ರಾವಣಿ ಆಗಿರಲಿಲ್ಲ.
ಎಲ್ಲ ಪ್ರೇಮ ಕಥೆಯಲ್ಲಿ ನಮ್ಮ ಪ್ರೀತಿಯನ್ನು ಹುಡುಕುವುದು ಹದಿಹರೆಯದ ಹೃದಯದ ಹುಚ್ಚುತನ ಅಂದುಕ್ಕೊಂಡೆ.
ಶ್ರಾವಣಿಯ ಪ್ರೇಮಪಾನ ಕುಡಿದ ನಾನೂ ಅದೇ ಅಮಲಲ್ಲಿ ತೇಲುತಿದ್ದೆ. ಅಡುಗೆ ಕೋಣೆಯಿಂದ ಅಮ್ಮ ಊಟಕ್ಕೆ ಕರೆಯುತಿದ್ದಳು.


ಮುಂದುವರಿಯುವುದು .....

No comments:

Post a Comment